ನೀಲ್ಗಾಯ್ -
ಆರ್ಟಿಯೊಡ್ಯಾಕ್ಟಿಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದ ಚತುಷ್ಪಾದಿ. ನೀಲಿ ಗೂಳಿ (ಬ್ಲೂ ಬುಲ್) ಪರ್ಯಾಯನಾಮ. ಬಾಸಿಲ್ಯಾಫಸ್ ಟ್ರ್ಯಾಗೋಕಮೀಲಸ್ ವೈಜ್ಞಾನಿಕ ಹೆಸರು. ಇಡೀ ಏಷ್ಯ ಖಂಡದಲ್ಲೇ ಅತಿ ದೊಡ್ಡ ಆಂಟಿಲೋಪ್ ಎನಿಸಿಕೊಂಡಿರುವ ಇದು ಭಾರತದಲ್ಲಿ ಮಾತ್ರ ಕಾಣಸಿಗುತ್ತದೆ. ಇದರ ಉದ್ದ ಸುಮಾರು 2 ಮೀ; ಭುಜದ ಬಳಿಯ ಎತ್ತರ 1.2-1.5 ಮೀ; ತೂಕ ಸುಮಾರು 200 ಕೆಜಿ. ಇದಕ್ಕೆ ಸುಮಾರು 500 ಮಿಮೀ. ಉದ್ದದ ಬಾಲವುಂಟು. ತೂಕ ಹಾಗೂ ಗಾತ್ರದಲ್ಲಿ ಸಾಮಾನ್ಯವಾಗಿ ಹೆಣ್ಣಿಗಿಂತ ದೊಡ್ಡದಾಗಿರುವ ಗಂಡನ್ನು ನೀಲ್ಗಾವೋ ಎಂದೂ ಹೆಣ್ಣನ್ನು ನೀಲ್ಗಾಯ್ ಎಂದೂ ಕರೆಯುತ್ತಾರೆ. ನೀಲ್ಗಾಯ್ ವಿಚಿತ್ರ ಸ್ವರೂಪದ ಪ್ರಾಣಿ. ಮುಖ ಕುದುರೆಯ ಮುಖದಂತಿದೆಯಾದರೆ, ದೇಹ ಹಸುವಿನದರಂತೆ. ಕತ್ತು ಗಿಡ್ಡ, ದೇಹದ ಹಿಂಭಾಗ ಡುಬ್ಬಿನಿಂದ ಹಿಂದಕ್ಕೆ ಹೋದಂತೆ ಇಳಿಯುತ್ತಾ ಹೋಗುತ್ತದೆ. ದೇಹದ ಮುಂಭಾಗ ಹಿಂಭಾಗಕ್ಕಿಂತ ಹೆಚ್ಚು ಮಾಂಸಖಂಡಗಳಿಂದ ಕೂಡಿ ದಪ್ಪವಾಗಿ ಕಾಣುತ್ತದೆ. ಕೊಂಬುಗಳಿರುವುದು ಗಂಡಿನಲ್ಲಿ ಮಾತ್ರ. ಇವು ಚೂಪಾಗಿಯೂ ಚಿಕ್ಕವಾಗಿಯೂ ಇದೆ. ಅಲ್ಲದೆ ಗಂಡಿನ ಕತ್ತಿನ ಮೇಲ್ಭಾಗದಲ್ಲಿ ಹಂದಿಯ ಕೇಸರದಂತೆ ಮತ್ತು ಕತ್ತಿನ ಕೆಳಭಾಗದಲ್ಲಿ ಕುಚ್ಚಿನಂತೆ ಇರುವ ಕೇಶರಾಶಿ ಇದೆ. ಕೆನ್ನೆಗಳ ಮೇಲೆ ಎರಡು ಬಿಳಿಯ ಚುಕ್ಕೆಗಳಿವೆ. ಗಂಡು ನೀಲ್ಗಾಯಿಯ ಬಣ್ಣ ಕಪ್ಪು ಮಿಶ್ರಿತ ಬೂದು, ಹೆಣ್ಣಿನದು ಬಿಳಿಮಿಶ್ರಿತ ಕಂದು ಬಣ್ಣ ಹೆಣ್ಣು ಗಂಡುಗಳೆರಡರಲ್ಲೂ ಕತ್ತಿನ ಕೆಳಭಾಗ ಹಾಗೂ ಗೊರಸಿನ ಮೇಲ್ಭಾಗ ಬಿಳಿಯ ಕೂದಲಿನಿಂದ ತುಂಬಿವೆ. ಬಾಲದ ತುದಿ ಕುಂಚದಂತಿದೆ.

ನೀಲ್ಗಾಯ್ ಸಂಘ ಜೀವಿ : ಸಾಮಾನ್ಯವಾಗಿ ಒಂದು ಹಿಂಡಿನಲ್ಲಿ ನಾಲ್ಕರಿಂದ ಹನ್ನೆರಡು ಪ್ರಾಣಿಗಳಿರುವುವು. ಚೆನ್ನಾಗಿ ಬೆಳೆದ ಶಕ್ತಿಯುತವಾದ ಗಂಡು ಹಿಂಡಿನ ಮುಖಂಡ. ನೀಲ್ಗಾಯ್‍ಗಳು ಸಾಮಾನ್ಯವಾಗಿ ಸ್ಟೆಪೀಸ್ ಹುಲ್ಲುಗಾವಲು ಮತ್ತು ಕುರುಚಲು ಗಿಡದಿಂದ ಕೂಡಿರುವ ಪ್ರದೇಶದಲ್ಲಿ ವಾಸಿಸುವುವು. ಹಲವೊಮ್ಮೆ ಅರಣ್ಯಪ್ರದೇಶಗಳಲ್ಲಿ ಕೆಲವು ಗೊತ್ತಾದ ಸ್ಥಳಗಳಲ್ಲಿ ಮಾತ್ರ ಕಾಣಸಿಗುವುದುಂಟು. ನೀಲ್ಗಾಯ್‍ಗಳಲ್ಲಿ ತಮ್ಮ ಪ್ರದೇಶವನ್ನು ಗುರುತು ಮಾಡುವಂಥ ಯಾವುದೇ ವಿಧವಾದ ಕಾರ್ಯಚಟುವಟಿಕೆಗಳು ಕಂಡುಬಂದಿಲ್ಲ. ಆದರೆ, ಹಿಂಡುಗಳು ದಿನನಿತ್ಯವೂ ಗೊತ್ತಾದ ದಾರಿ ಮತ್ತು ಸ್ಥಳಗಳಲ್ಲಿ ಮಾತ್ರ ತಮ್ಮ ಕಾಲವನ್ನು ಕಳೆಯುತ್ತವೆ.

ನೀಲ್ಗಾಯ್‍ಗಳ ಆಹಾರ ಎಲಚಿ, ನೆಲ್ಲಿ ಮುಂತಾದ ಗಿಡಮರಗಳ ಎಳೆ ಚಿಗುರು; ಆಡಿನ ರೀತಿ ಮುಂಗಾಲುಗಳನ್ನು ಮೇಲೆತ್ತಿ ಮರಕ್ಕೆ ಆನಿಸಿ ಸೊಪ್ಪನ್ನು ತಿನ್ನುತ್ತವೆ. ನೆಲದ ಮೇಲೆ ಬಿದ್ದಿರುವ ಇಪ್ಪೆ ಹೂಗಳು ನೀಲ್ಗಾಯ್‍ಗಳಿಗೆ ಬಲು ಅಚ್ಚುಮೆಚ್ಚು. ಹಗಲು ವಿಶ್ರಮಿಸುತ್ತಿದ್ದು ಪ್ರಾತಃಕಾಲ ಹಾಗೂ ಸಾಯಂಕಾಲದ ಹೊತ್ತು ಆಹಾರ ಸೇವನೆಗಾಗಿ ಹಿಂಡುಗಳಲ್ಲಿ ಅಡ್ಡಾಡುತ್ತವೆ. ನೀಲ್ಗಾಯ್‍ಗಳು ಎರಡು ಮೂರು ದಿನಗಳಿಗೊಮ್ಮೆ ನೀರು ಕುಡಿಯುತ್ತವೆ. ಇವು ಓಡಾಡುವ ಜಾಗಗಳ ಹತ್ತಿರ ನೀರು ಇರಲೇಬೇಕೆಂಬ ನಿಯಮವಿಲ್ಲ. ಆದರೂ ಕೆಲವೊಮ್ಮೆ ತಲೆಯನ್ನು ನೀರಿನಲ್ಲಿ ಮುಳುಗಿಸಿ ಸೋರುತ್ತಿರುವ ನೀರನ್ನು ಡುಬ್ಬದ ಮೇಲೆ ಎರಚಿಕೊಳ್ಳುವುದು ಇವಕ್ಕೆ ಬಲು ಇಷ್ಟ.

ನೀಲ್ಗಾಯ್‍ಗಳ ಶ್ರವಣಶಕ್ತಿ ಮಂದ, ಆದರೂ ಕಣ್ಣು ಮೂಗು ಬಹಳ ಚುರುಕಾಗಿವೆ. ಅಪಾಯದ ಸೂಚನೆ ಕಂಡುಬಂದಾಗ ಇವು ಕೆಳಧ್ವನಿಯಲ್ಲಿ ಗುಟುರು ಹಾಕುತ್ತವೆ. ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುತ್ತವೆ. ಹಳ್ಳಿ ಮತ್ತು ಗುಡ್ಡಗಾಡಿನ ಜನ ನೀಲ್ಗಾಯ್ ಅನ್ನು ಪೂಜನೀಯವೆಂದು ಭಾವಿಸುತ್ತಾರೆ.

ನೀಲ್ಗಾಯ್‍ಗಳು ಕೂಡುವ ಕಾಲ ಮಾರ್ಚಿ ತಿಂಗಳು. ಪ್ರಣಯಾಚರಣೆಯ ಸಮಯದಲ್ಲಿ ಗಂಡು ತನ್ನ ಕತ್ತನ್ನು ನೀಳವಾಗಿ ಚಾಚಿ ಹೆಣ್ಣಿನ ಹಿಂಭಾಗದ ಮೇಲೆ ತಲೆಯನ್ನು ಇಡುತ್ತದೆ. ಈ ಪ್ರಕಾರದ ವರ್ತನೆ ಗಂಡುಗಳು ಕೋಪದಿಂದ ಹೋರಾಟಕ್ಕೆ ನಿಂತಾಗಲೂ ಕಂಡು ಬರುತ್ತದೆ. ಕತ್ತನ್ನು ನೀಳವಾಗಿ ಚಾಚುವುದು ಬಹುಶಃ ಹೆದರಿಸುವ ಒಂದು ರೀತಿಯಿರಬೇಕು. ಎಂಟು ತಿಂಗಳ ಗರ್ಭಾವಧಿಯ ತರುವಾಯ ಹೆಣ್ಣು ಒಂದು ಅಥವಾ ಎರಡು ಮರಿಗಳನ್ನು ಹಾಕುತ್ತದೆ. ಮೊದಲ ಗರ್ಭಧಾರಣೆಯಲ್ಲಿ ಒಂದೇ ಒಂದು ಮರಿಯನ್ನೂ ಅನಂತರದ ಗರ್ಭಧಾರಣೆಗಳಲ್ಲಿ ಎರಡು ಮರಿಗಳನ್ನು ಹಾಕುವುದು ಸಾಮಾನ್ಯ.								(ಎಂ.ಎನ್.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ